ದಾದು
 1544-1603. ದಾದು ಪಂಥದ ಪ್ರವರ್ತಕ, ಅನುಭಾವಿ, ಬೈರಾಗಿ, ಸಂತ ಕಬೀರನ ಶಿಷ್ಯ. ಹುಟ್ಟಿದ್ದು ಅಹಮದಾಬಾದಿನಲ್ಲಿ. ತನ್ನ ಜೀವಿತದ ಬಹು ಕಾಲವನ್ನು ರಜಪುಟಾಣದಲ್ಲಿ ಕಳೆದ. ಈತನ ಅನುಯಾಯಿಗಳು ಈಗಲೂ ಹೆಚ್ಚಾಗಿ ಅಲ್ಲಿಯೇ ಇದ್ದಾರೆ. ಈತನ ಉಪದೇಶಗಳನ್ನು ವಾಣಿ ಎಂದು ಕರೆಯುತ್ತಾರೆ. ಈ ಗ್ರಂಥಗಳಲ್ಲಿ 37 ಅಧ್ಯಾಯಗಳಿದ್ದು, 5,000 ಪದ್ಯಗಳಿವೆ. ಕೆಲವು ಪದ್ಯಗಳು ಸ್ತೋತ್ರರೂಪದಲ್ಲಿವೆ. ಈತನಿಗೆ ಪ್ರಥಮತಃ 52 ಜನ ಪಟ್ಟ ಶಿಷ್ಯರಿದ್ದು, ಒಬ್ಬೊಬ್ಬರೂ ಒಂದೊಂದು ಪೂಜಾಗೃಹವನ್ನು ಸ್ಥಾಪಿಸಿದರು ಎನ್ನಲಾಗಿದೆ. ಅವನ್ನು ದಾದೂದ್ವಾರ ಎನ್ನುತ್ತಾರೆ. ದಾದೂನ ವಾಣಿ ಅಲ್ಲದೆ ಈತನ ಶಿಷ್ಯರೂ ಮಕ್ಕಳೂ ಹಿಂದಿಯಲ್ಲಿ ಬರೆದ ಕೆಲವು ಗ್ರಂಥಗಳಿವೆ. ಈತನ ಶಿಷ್ಯರಲ್ಲಿ ಕೆಲವರು ಗೃಹಸ್ಥರು ಮತ್ತೆ ಕೆಲವರು ಸಂನ್ಯಾಸಿಗಳು. ಗೃಹಸ್ಥಶಿಷ್ಯರನ್ನು ಸೇವಕರೆಂದೂ ಸಂನ್ಯಾಸಿಗಳನ್ನು ದಾದುಪಂಥಿಗಳೆಂದೂ ಕರೆಯುತ್ತಾರೆ. 

	ಈ ಪಂಥಕ್ಕೆ ತನ್ನದೇ ಆದ ಧಾರ್ಮಿಕ ಆಚರಣೆಗಳಿವೆ. ಮದುವೆ ನಿಷೇಧವಲ್ಲ, ಮಾನವ ಗೃಹಸ್ಥನಾಗಿ ಅಥವಾ ಬ್ರಹ್ಮಚಾರಿಯಾಗಿ ಉಳಿಯಲಿಕ್ಕೆ ಸ್ವಾತಂತ್ರ್ಯ ಉಂಟು. ಮಾಂಸಾಹಾರ ಕೂಡದು; ಅಹಿಂಸೆಯಿಂದಿರಬೇಕು. ಪ್ರಾಪಂಚಿಕ ವಿಷಯಗಳಲ್ಲಿ ಪ್ರವೃತ್ತಿ ಮಾರ್ಗ ಅಥವಾ ನಿವೃತ್ತಿ ಮಾರ್ಗವನ್ನು ಅನುಸರಿಸಲಿಕ್ಕೆ ಸ್ವಾತಂತ್ರ್ಯ ಉಂಟು. ವೇದಗಳನ್ನು ಓದುವುದಕ್ಕಿಂತ ಪರಮಾತ್ಮನಲ್ಲಿ ಅಚಲವಾದ ವಿಶ್ವಾಸವನ್ನಿಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅನುಷ್ಠಾನ, ಜಪ, ಪರಮಾತ್ಮ ಸಂಕೀರ್ತನೆಗಳಿಗೆ ಪ್ರಾಮುಖ್ಯವಿರಬೇಕು-ಇವೇ ಮೊದಲಾದ ನಿಯಮಗಳನ್ನು ಈ ಪಂಥ ಬೋಧಿಸುತ್ತದೆ.

	ದಾದೂದ್ವಾರಗಳಲ್ಲಿ ದಾದುವಿನ ಗ್ರಂಥವಾದ ವಾಣಿಯನ್ನು ಇಟ್ಟು ವಿಗ್ರಹಗಳಿಗೆ ಸಲ್ಲಿಸುವ ರೀತಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ವಾಣಿಯನ್ನು ಹಾಡುವುದೂ ಉಂಟು. ನಾರಾಯಣ ಎನ್ನುವ ಒಂದು ಸ್ಥಳದಲ್ಲಿ ದಾದುವಿನದೆಂದು ಹೇಳಲಾದ ಪಾದರಕ್ಷೆ ಹಾಗೂ ಆತ ಧರಿಸುತ್ತಿದ್ದ ವಸ್ತ್ರಗಳನ್ನು ಇಟ್ಟು ಪೂಜಿಸುತ್ತಾರೆ. 
 (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ